1. ಉದಯೋನ್ಮುಖ ಬರಹಗಾರರ ಕೃತಿಗಳ ಪ್ರಕಟಣೆ :

    ಉದಯೋನ್ಮುಖ ಬರಹಗಾರರ ಆಯ್ದ ಕೃತಿಗಳನ್ನು ಪ್ರಕಟಿಸುವ ಹಾಗೂ ವಿವಿಧ ಲೇಖಕರ ಕೃತಿಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಹಲವಾರು ಲೇಖಕ/ಲೇಖಕಿಯರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುತ್ತಿದ್ದೇವೆ.

  2. ಪುಸ್ತಕ ಸಂಸ್ಕೃತಿಗೆ ಪೂರಕವಾಗಿ ‘ನೂರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೂರು-ನೂರು ಮಕ್ಕಳ ಪುಸ್ತಕಗಳ ವಿತರಣಾ ಯೋಜನೆ’:

    ಪ್ರತಿ ವರ್ಷವೂ ಈ ಯೋಜನೆಯಡಿ ಪಠ್ಯೇತರ ಮೌಲ್ಯಯುತ ಮಕ್ಕಳ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಧಾರವಾಡ, ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ದಕ್ಷಿಣ, ಹಾಸನ ಜಿಲ್ಲೆಗಳ 1100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 1,10,000 ಉಪಯುಕ್ತ ಮಕ್ಕಳ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ‘ಪುಸ್ತಕ ಪ್ರೀತಿ’ ಬೆಳೆಸಲು ಸಹಕಾರಿಯಾಗಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

    ಈ ಯೋಜನೆಗೆ ಪ್ರತಿವರ್ಷವೂ ಪುಸ್ತಕಗಳನ್ನು ದಾನರೂಪದಲ್ಲಿ ನೀಡುತ್ತಾ ಬಂದಿರುವ ಸಂಘ ಸಂಸ್ಥೆಗಳ ಜೊತೆಗೆ ಸಪ್ನಾ ಬುಕ್ ಹೌಸ್, ನವಕರ್ನಾಟಕ, ಅಂಕಿತ ಪುಸ್ತಕ, ವಸಂತ ಪ್ರಕಾಶನ, ಹೇಮಂತ ಸಾಹಿತ್ಯ, ಗೀತಾಂಜಲಿ ಪಬ್ಲಿಕೇಷನ್ಸ್, ಐಬಿಹೆಚ್ ಪ್ರಕಾಶನ, ಬಹುರೂಪಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಸಾಹಿತ್ಯ ಲೋಕ ಪಬ್ಲಿಕೇಷನ್ಸ್, ಸ್ನೇಹ ಬುಕ್ ಹೌಸ್, ದಿವ್ಯಚಂದ್ರ ಪ್ರಕಾಶನ, ಅಕ್ಷರ ಮಂಟಪ, ಕಣ್ವ ಪ್ರಕಾಶನ, ನಿರಂತರ, ಸಾವಣ್ಣ ಪಬ್ಲಿಕೇಷನ್ಸ್, ಜ್ಞಾನಯೋಗಿ, ಭಾರತಿ ಪ್ರಕಾಶನ, ವಾಸನ್ ಪಬ್ಲಿಕೇಷನ್ಸ್, ಸಾಹಿತ್ಯ ಪ್ರಕಾಶನ, ಪ್ರಿಸಂ ಬುಕ್ಸ್ ಮುಂತಾದವರೆಲ್ಲರಿಗೂ ಹಾಗೂ ಹಲವಾರು ಪುಸ್ತಕದಾನಿಗಳಿಗೆ ಕೃತಜ್ಞತೆಗಳು.

    ಸಂತೋಷದಿಂದ ಈ ಯೋಜನೆಗೆ ಪುಸ್ತಕಗಳನ್ನು ನೀಡುವ ಮೂಲಕ ಸಹಕರಿಸುತ್ತಿದ್ದಾರೆ. ಅವರ ಸಹಕಾರವನ್ನು ಮುಂದೆಯೂ ಬಯಸುತ್ತಾ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

  3. ವಾರ್ಷಿಕ ಪ್ರಶಸ್ತಿಗಳು:

    ಮೌಲಿಕ ಗುಣಮಟ್ಟದ ಕೃತಿಗಳನ್ನು ಬರೆಯುವ, ಪ್ರಕಟಿಸುವ ಹಾಗೂ ಮುದ್ರಿಸುವ ಲೇಖಕ, ಲೇಖಕಿ, ಯುವ ಲೇಖಕ, ಲೇಖಕಿ, ಪ್ರಕಾಶಕರು ಹಾಗೂ ಮುದ್ರಕರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವ ಸಲುವಾಗಿ ‘ಸಾಹಿತ್ಯ ರತ್ನ’, ‘ಯುವ ಸಾಹಿತ್ಯ ರತ್ನ’, ‘ಪುಸ್ತಕ ರತ್ನ’ ಹಾಗೂ ‘ಮುದ್ರಣ ರತ್ನ’ ಪ್ರಶಸ್ತಿಗಳ ಜೊತೆಗೆ ಸ್ಮರಣಿಕೆ, ಪ್ರಮಾಣಪತ್ರ ಮತ್ತು ₹10,000/- ನಗದು ಬಹುಮಾನಗಳನ್ನು ನೀಡುತ್ತಾ ಬಂದಿದ್ದೇವೆ. ಮತ್ತಷ್ಟು ಜನರಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದ್ದೇವೆ.

  4. ಬರಹಗಾರ / ಪ್ರಕಾಶಕರ ಕಮ್ಮಟ ‘ಮಾಸದ ಮಾತುಕತೆ’ ಯೋಜನೆ :

    ಮೌಲ್ಯಯುತ ಪುಸ್ತಕ ಬರೆಯುವ ಹಾಗೂ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಹಕಾರಿಯಾಗುವಂತೆ ಇಂದಿನ ಯುವಜನರಿಗೆ ಕಮ್ಮಟ ಹಾಗೂ ಶಿಬಿರಗಳನ್ನು ಏರ್ಪಡಿಸಿ, ತಜ್ಞರಿಂದ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

  5. ಸಂಘದ ಚಟುವಟಿಕೆಗಳನ್ನು ರಾಜ್ಯವ್ಯಾಪಿ ಸಂಘಟಿಸುವುದು :

    ರಾಜ್ಯಾದ್ಯಂತ ಸಂಘದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸುವಂತಾಗಲು ಜಿಲ್ಲೆಗೆ ಒಬ್ಬರು ಅಥವಾ ಇಬ್ಬರಂತೆ ಕೇಂದ್ರ ಸಂಘದ ಪ್ರತಿನಿಧಿಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ನೇಮಕ ಮಾಡಿ, ಸದಸ್ಯತ್ವದ ಆಂದೋಲನದ ಮೂಲಕ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಂಡು ಸಂಘದ ಯೋಜನೆಗಳನ್ನು ಪ್ರತಿ ಜಿಲ್ಲೆ, ತಾಲ್ಲೂಕುಗಳಿಗೂ ತಲುಪಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

  6. ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡ ಇತರರನ್ನು ಗೌರವಿಸುವುದು:

    2023ನೇ ಸಾಲಿನ ವಿಶ್ವ ಪುಸ್ತಕ ದಿನದಿಂದ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುಖಪುಟ ವಿನ್ಯಾಸಕರು, ಕರಡು ತಿದ್ದುವವರು, ಡಿಟಿಪಿ ಮಾಡುವವರು, ಪುಸ್ತಕಗಳನ್ನು ಮುದ್ರಿಸುವ ಮುದ್ರಣಕಾರರು, ಬೈಂಡರ್‌ಗಳು ಹಾಗೂ ಕನ್ನಡ ಪುಸ್ತಕ ಪರಿಚಾರಕರನ್ನು ಗುರುತಿಸಿ ಅವರನ್ನು ಗೌರವಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ.

  7. ಹಾರದ ಬದಲು ಪುಸ್ತಕ ಕೊಡುಗೆ :

    ಸಭೆ ಸಮಾರಂಭಗಳಲ್ಲಿ ಹಾರದ ಬದಲು ಪುಸ್ತಕಗಳನ್ನು ಬಳುವಳಿಯಾಗಿ ನೀಡುವ ಮೂಲಕ ಪುಸ್ತಕ ಪ್ರೀತಿಯನ್ನು ಬೆಳೆಸುವುದು.

  8. ಆರ್ಥಿಕ ನೆರವು :

    ಬರಹಗಾರರು, ಪ್ರಕಾಶಕರು ಹಾಗೂ ಪುಸ್ತಕೋದ್ಯಮದ ಬಂಧುಗಳು ಸಂಕಷ್ಟದಲ್ಲಿದ್ದಾಗ ಅಲ್ಪ ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದೇವೆ.

ಕೃತಜ್ಞತೆಗಳು

ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಂಘದ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಸರ್ಕಾರಕ್ಕೆ ಆಭಾರಿಯಾಗಿದ್ದೇವೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು, ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇವರಲ್ಲರಿಗೂ ಬರಹಗಾರರು, ಪ್ರಕಾಶಕರು ಹಾಗೂ ಓದುಗರಿಗೆ ತೋರುತ್ತಿರುವ ಕಾಳಜಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಘದ ಕಾರ್ಯಕ್ರಮಗಳಿಗಾಗಿ ಧನ ಸಹಾಯವನ್ನು ನೀಡುತ್ತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಸಂಘದ ಕಾರ್ಪಸ್ ಫಂಡ್‌ಗೆ ಕೊಡುಗೆಯಾಗಿ ಆರ್ಥಿಕ ನೆರವು ನೀಡಿರುವ ನಾಡೋಜ ಡಾ. ಕಮಲಾ ಹಂಪನಾ, ಮಂಡ್ಯ ನಗರದ ಶಾಸಕರಾಗಿದ್ದ ಶ್ರೀ ಎಂ. ಶ್ರೀನಿವಾಸ, ಲಯನ್ ಶ್ರೀ ಬಿ.ಆರ್. ಅಶೋಕ್ ಕುಮಾರ್, ಸಪ್ನಾ ಬುಕ್ಸ್ ಹೌಸ್‌ನ ಶ್ರೀ ನಿತಿನ್ ಎಸ್. ಷಾ, ಶ್ರೀ ಟಂಕಸಾಲೆ ಎಸ್. ನಾಗರಾಜ್ ಹಾಗೂ ಕೆಲವು ಪದಾಧಿಕಾರಿ ಮಿತ್ರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಸಂಘದ ಕಾರ್ಯಕ್ರಮಗಳಿಗೆ ಹಿಂದಿನಿಂದಲೂ ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಾ ಬಂದಿರುವ ಹಿರಿಯ ಸಾಹಿತಿಗಳಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ, ಡಾ. ವಿಜಯಮ್ಮ, ನಾಡೋಜ ಡಾ. ವೂಡೇ ಪಿ. ಕೃಷ್ಣ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಶ್ರೀ ಜಾಣಗೆರೆ ವೆಂಕಟರಾಮಯ್ಯ, ಶ್ರೀ ಸು. ರುದ್ರಮೂರ್ತಿ ಶಾಸ್ತ್ರಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ. ಕರೀಗೌಡ ಬೀಚನಹಳ್ಳಿ, ಪ್ರೊ. ಹಿ.ಚಿ. ಬೋರಲಿಂಗಯ್ಯ ಮುಂತಾದ ಹಿರಿಯರಿಗೆ ನಾವು ಪ್ರೀತಿಯ ನಮನಗಳನ್ನು ಸಲ್ಲಿಸುತ್ತಿದ್ದೇವೆ.

ಸಂಘದ ಎಲ್ಲಾ ಕಾರ್ಯಯೋಜನೆಗಳಿಗೆ ಬೆನ್ನೆಲುಬಾಗಿ ನಿಂತು, ಸರ್ಕಾರದ ಕಾರ್ಯದರ್ಶಿಯವರು, ಗೌರವಾನ್ವಿತ ಸಚಿವರು, ಸನ್ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿ ಆಗಲು ಕರೆದಾಗ ಕನ್ನಡ ಪುಸ್ತಕೋದ್ಯಮದ ಹಿತಕ್ಕಾಗಿ ಸಂಘದ ನಿಯೋಗದ ನೇತೃತ್ವ ವಹಿಸುವ ಹಾಗೂ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ನಮಗೆ ಸದಾ ತಿಳುವಳಿಕೆ ನೀಡುತ್ತಿರುವ ಗೌರವ ಮಾರ್ಗದರ್ಶಕರಾಗಿರುವ ಹಿರಿಯ ಕವಿಗಳಾದ ಪದ್ಮಶ್ರೀ ಡಾ. ದೊಡ್ಡರಂಗೇಗೌಡ, ಚಿಂತಕರು, ವಿದ್ವಾಂಸರು, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಹಿರಿಯ ಸಾಹಿತಿಗಳಾದ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಾಡೋಜ ಡಾ. ಹಂಪನಾ ಗಿರಿಜಯ್ಯ, ನಾಡೋಜ ಡಾ. ಕಮಲ ಹಂಪನಾ, ನಿತಿನ್ ಎಸ್. ಷಾ, ಹೇಮಂತ್ ವೆಂಕಟೇಶ್, ಡಾ. ವಸುಂಧರ ಭೂಪತಿ, ಡಾ. ಪದ್ಮಿನಿ ನಾಗರಾಜ್, ಶ್ರೀ ವಿಶ್ವೇಶ್ವರ ಭಟ್, ಶ್ರೀ ಜಿ.ಎನ್. ಮೋಹನ್, ಶ್ರೀ ರಾ. ಸೂರಿ, ಶ್ರೀ ಸ್ವ್ಯಾನ್ ಕೃಷ್ಣಮೂರ್ತಿ, ಡಾ. ಎಂ.ಎಸ್. ಮೂರ್ತಿ ಹಾಗೂ ಶ್ರೀ ರಾ.ನಂ. ಚಂದ್ರಶೇಖರ್ ಇವರಲ್ಲರಿಗೂ ನಾವು ಪ್ರೀತಿಯ ನಮನಗಳನ್ನು ಅರ್ಪಿಸುತ್ತಿದ್ದೇವೆ.

ಈ ಸಂಘವನ್ನು ಸ್ಥಾಪಿಸಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ಜೊತೆ ಶ್ರಮಿಸಿ, ನಮ್ಮನ್ನು ಬೆಂಬಲಿಸಿರುವ ಗೆಳೆಯರಾದ ಸನ್ಮಾನ್ಯ ಶ್ರೀ ಬಿ.ಕೆ. ನಂಜುಂಡಪ್ಪ (ಭಾಗ್ಯಲಕ್ಷ್ಮೀ ಪ್ರಕಾಶನ), ಶ್ರೀ ಆರ್. ಜನಾರ್ಧನ್ (ಸಾಗರ್ ಪ್ರಕಾಶನ), ಶ್ರೀ ಕೃಷ್ಣಮೂರ್ತಿ ಕೌಶಿಕ್ (ವಿಜಯ ಸಾಹಿತ್ಯ ಪ್ರಕಾಶನ) ಹಾಗೂ ಡಾ. ಟಿ.ಎಸ್. ವಿಶ್ವನಾಥ್ (ಅಳಿಲು ಸೇವಾ ಸಂಸ್ಥೆ) ಇವರನ್ನು ಸ್ಮರಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ.

ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ, ಆರ್ಥಿಕವಾಗಿ ಹಾಗೂ ಭೌತಿಕವಾಗಿ, ಪರೋಕ್ಷವಾಗಿ-ಪ್ರತ್ಯಕ್ಷವಾಗಿ ನಮ್ಮೊಂದಿಗೆ ಸಂಘದ ಕಾರ್ಯಕ್ರಮಗಳ ಯಶಸ್ಸಿಗೆ ಸದಾ ಶ್ರಮಿಸುತ್ತಿರುವ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಯುತ ಎಚ್.ಕೆ. ಲಕ್ಷ್ಮೀನಾರಾಯಣ ಅಡಿಗ, ಆರ್. ದೊಡ್ಡೇಗೌಡ, ಡಾ. ಎಸ್.ಜಿ. ಮಾಲತಿಶೆಟ್ಟಿ, ಬಿ.ಕೆ. ಸುರೇಶ್, ವಿ. ಹೇಮಂತ್‌ಕುಮಾರ್, ಕೆ.ಎಸ್. ಮುರಳಿ, ಡಾ. ಬೈರವಮಂಗಲ ರಾಮೇಗೌಡ, ಸ್ವ್ಯಾನ್ ಕೃಷ್ಣಮೂರ್ತಿ, ಎಲ್.ಎನ್. ಸುನಿಲ್, ಎಂ.ಆರ್. ಗಿರಿರಾಜು, ಡಾ. ಶರಣು ಹುಲ್ಲೂರು, ಬಿ.ಎಂ. ಚಂದ್ರಕೀರ್ತಿ, ಕೆ.ಬಿ. ಪರಶಿವಪ್ಪ, ಪ್ರವೀಣ್ ಜಗಾಟ, ಎ. ರಘುವೀರ್, ಶ್ರೀಮತಿ ಪದ್ಮಲತಾ ಮೋಹನ್, ನಿಡಸಾಲೆ ಪಿ. ವಿಜಯ್, ಲಕ್ಷ್ಮೀಶ್ರೀನಿವಾಸ, ಪ್ರಕಾಶ್ ಕಂಬತ್ತಳ್ಳಿ, ಬಿ.ಆರ್. ಅಶೋಕ್ ಕುಮಾರ್, ವಿಭಾಗೀಯ ಸಂಚಾಲಕರಾದ ಚಿಕ್ಕಮಗಳೂರಿನ ಸೂರಿ ಶ್ರೀನಿವಾಸ್, ಕಲಬುರಗಿಯ ಡಾ. ಶ್ರೀಶೈಲನಾಗರಾಳ, ಮಂಗಳೂರಿನ ಶ್ರೀ ಎಂ. ಸದಾಶಿವ, ಬೆಂಗಳೂರು ದಕ್ಷಿಣದ ಶ್ರೀಮತಿ ಶೈಲಾಶ್ರೀನಿವಾಸ್ ಹಾಗೂ ಶ್ರೀ ಮಹೇಶ್ ಕುಮಾರ್ ಇವರಿಗೆ ವಿಶೇಷವಾದ ಕೃತಜ್ಞತೆಗಳು.

ಸಂಘದ ಪ್ರಯತ್ನದ ಫಲ

1. ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕ ಆಯ್ಕೆ ಮತ್ತು ಖರೀದಿ ಬಗ್ಗೆ ಸಮಗ್ರವಾದ ನಿಯಮಗಳನ್ನು ಸರ್ಕಾರದಿಂದ ದಿನಾಂಕ: 07-02-2005ರಂದು ಪ್ರಕಟಿಸುವಲ್ಲಿ ನಾವು ಸಫಲರಾಗಿದ್ದೇವೆ.

2. ದಿನಾಂಕ: 01-04-2018ರಿಂದ ಪುಸ್ತಕಗಳ ಪುಟವಾರು ಬೆಲೆ ನಿಗದಿ ಆದೇಶ ಹೊರಡಿಸುವಲ್ಲಿ ಸಫಲರಾಗಿದ್ದೇವೆ.

3. ಕನ್ನಡ ಪುಸ್ತಕಗಳಿಗೆ ಬೆಲೆ ನಿಗದಿಪಡಿಸುವಂತೆಯೇ ಇಂಗ್ಲಿಷ್ ಮತ್ತು ಇತರ ಭಾಷೆಯ ಪುಸ್ತಕಗಳಿಗೂ ಬೆಲೆ ನಿಗದಿಪಡಿಸಲು ಸರ್ಕಾರದಿಂದ ಆದೇಶ ಹೊರಡಿಸುವಲ್ಲಿ ಸಫಲರಾಗಿದ್ದೇವೆ.

4. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ವಾರ್ಷಿಕ ಪುಸ್ತಕ ಖರೀದಿ ಮಿತಿಯನ್ನು 2.5 ಲಕ್ಷಕ್ಕೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೇವೆ.

5. ಸರ್ಕಾರದಿಂದ ಸಂಘಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸದಸ್ಯರಾಗಿ ಪ್ರಾತಿನಿಧ್ಯ ದೊರೆತಿದೆ.

‘ಪುಸ್ತಕ ಸಂಸ್ಕೃತಿ’ಯ ವಿಸ್ತರಣೆಗೆ ಸರ್ಕಾರದಿಂದ ಆಗಬೇಕಾಗಿರುವ ಕಾರ್ಯಗಳು


1. ಏಕಗವಾಕ್ಷಿ ಸಗಟು ಪುಸ್ತಕ ಖರೀದಿ ಯೋಜನೆ :

(1)ಕರ್ನಾಟಕ ಸರ್ಕಾರ ಪುಸ್ತಕ ಸಂಸ್ಕೃತಿಯ ಭಾಗವಾಗಿ ಕನ್ನಡ ಪುಸ್ತಕಗಳ ಲೇಖಕರಿಗೆ, ಪ್ರಕಾಶಕರಿಗೆ ಪ್ರೋತ್ಸಾಹದಾಯಕ ಯೋಜನೆಯಾಗಿ ‘ಏಕಗವಾಕ್ಷಿ ಸಗಟು ಪುಸ್ತಕ ಖರೀದಿ ಯೋಜನೆ’ಯನ್ನು 2006ರಿಂದ ಅನೇಕ ಹಿರಿಯ ಸಾಹಿತಿಗಳು, ಚಿಂತಕರ ಒತ್ತಾಸೆಯಿಂದ ಅನುಷ್ಠಾನಕ್ಕೆ ತಂದಿದೆ. ಸರ್ಕಾರ ರಚಿಸಿರುವ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳನ್ನು ತಲಾ 300 ಪ್ರತಿಗಳನ್ನು ಖರೀದಿಸಿ, ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, ಶಾಖಾ ಗ್ರಂಥಾಲಯಗಳು ಹಾಗೂ ಇತರ ಆರ್ಥಿಕವಾಗಿ ಹಿಂದುಳಿದ ಗ್ರಂಥಾಲಯಗಳಿಗೆ ವಿತರಿಸುವುದನ್ನು ಜಾರಿಗೆ ತಂದಿದ್ದರು.

ಆದರೆ ಸರ್ಕಾರ ಈ ಯೋಜನೆಗೆ ಕಾಲಕಾಲಕ್ಕೆ ಕ್ರಮಬದ್ಧವಾಗಿ ಅನುದಾನವನ್ನು ನೀಡದೆ, 2021ನೇ ಸಾಲಿನಿಂದ ಈ ಯೋಜನೆ ಸ್ಥಗಿತವಾಗಿ ನೆನೆಗುದಿಗೆ ಬಿದ್ದಿದೆ. ಜೊತೆಗೆ 2020ನೇ ಸಾಲಿನಲ್ಲಿ ಆಯ್ಕೆಯಾಗಿ 31-03-2024ರಂದು ಖರೀದಿಸಿದ್ದ ಸಗಟು ಪುಸ್ತಕ ಖರೀದಿ ಬಾಕಿ ಮೊತ್ತ ರೂ. 6.87 ಕೋಟಿ ಹಣ ಲೇಖಕರು, ಪ್ರಕಾಶಕರಿಗೆ ಇನ್ನೂ ಪಾವತಿಯಾಗಿಲ್ಲ. ಜ್ಞಾನವನ್ನು ಹಂಚಿ, ಸಾರ್ವಜನಿಕರಲ್ಲಿ ಪುಸ್ತಕ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಹೊರಟಿರುವ ಲೇಖಕರು, ಪ್ರಕಾಶಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಕ್ಕಪಕ್ಕದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯ ಪುಸ್ತಕಗಳನ್ನು ಸಾವಿರಾರು ಸಂಖ್ಯೆಯಲ್ಲಿ ಖರೀದಿಸುತ್ತಿವೆ. ಉದಾಹರಣೆಗೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸರ್ಕಾರವೇ ನೇರವಾಗಿ ಪ್ರತಿ ವರ್ಷ ಗ್ರಂಥಾಲಯಗಳಿಗೆ ಹಣ ಬಿಡುಗಡೆ ಮಾಡಿ ನಂತರ ಸ್ಥಳೀಯ ಸಂಸ್ಥೆಗಳಿಂದ ವಸೂಲಾದ ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಿಸಿಕೊಳ್ಳುತ್ತದೆ. ಸರ್ಕಾರಗಳೇ ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸಿ ಪುಸ್ತಕ ಸಂಸ್ಕೃತಿಯನ್ನು ಎಲ್ಲೆಡೆ ವಿಸ್ತರಿಸುತ್ತಿದ್ದಾರೆ.

ಈಗಾಗಲೇ 31-03-2026ರ ಅಂತ್ಯಕ್ಕೆ ರಾಜ್ಯದ ವಿವಿಧ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಅಂದಾಜು 800 ಕೋಟಿ ರೂ. ಗ್ರಂಥಾಲಯ ಕರ ಬಾಕಿ ಇದ್ದು, ಸದರಿ ಮೊತ್ತವನ್ನು ಕೂಡಲೇ ಗ್ರಂಥಾಲಯ ಇಲಾಖೆಗೆ ಪಾವತಿಸಿಕೊಂಡು, ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಂಥಾಲಯಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರವು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.

(2)ಯೋಜನೆಗೆ ಶಾಶ್ವತ ಪರಿಹಾರ :

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕಾನೂನಾತ್ಮಕವಾಗಿ ಸರ್ಕಾರ ರಚಿಸಿರುವ ‘ರಾಜ್ಯ ಗ್ರಂಥಾಲಯ ಪ್ರಾಧಿಕಾರ’ (State Library Authority) ಸಮಿತಿ ಇದ್ದು, ಈ ಸಮಿತಿಗೆ ಇಲಾಖೆಯ ಕಾರ್ಯದರ್ಶಿಯವರೇ ಅಧ್ಯಕ್ಷರಾಗಿರುತ್ತಾರೆ. ಆದರೆ ಕಳೆದ 3-4 ವರ್ಷಗಳಿಂದ ಸಮಿತಿಯು ಅಸ್ತಿತ್ವಕ್ಕೆ ಬಂದಿಲ್ಲ.

ರಾಜ್ಯದ ವಿವಿಧ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳು ಪ್ರತಿ ವರ್ಷ ವಸೂಲಾದ ಗ್ರಂಥಾಲಯ ಕರದ ಮೊತ್ತದ ಶೇಕಡಾ 5ರಷ್ಟು ರಾಜ್ಯ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಜಮಾ ಮಾಡಲಾಗುತ್ತದೆ. ಬೆಂಗಳೂರು ನಗರದಿಂದ ಶೇಕಡಾ 10ರಷ್ಟು ಹಣ ಜಮಾ ಆಗುತ್ತದೆ.

ಸದರಿ ಮೊತ್ತವನ್ನು ರಾಜ್ಯದ ಗ್ರಂಥಾಲಯಗಳ ಸಮಗ್ರ ಅಭಿವೃದ್ಧಿ ಮತ್ತು ಮೂಲ ಸೌಕರ್ಯಕ್ಕೆ ಬಳಸಬಹುದಾಗಿರುತ್ತದೆ. ಆದರೆ ಕಳೆದ 4 ವರ್ಷಗಳಿಂದ ರಾಜ್ಯ ಗ್ರಂಥಾಲಯ ಪ್ರಾಧಿಕಾರ ಸಭೆ ನಡೆಸದೆ ಅಂದಾಜು 50 ಕೋಟಿ ಮೊತ್ತದಷ್ಟು ಹಣ ಸಂಗ್ರಹವಾಗಿದ್ದು, ಯಾವುದೇ ಅಭಿವೃದ್ಧಿ ಕೆಲಸಕ್ಕಾಗಿ ವಿನಿಯೋಗಿಸದೆ ಇರುವುದರಿಂದ ಸದರಿ ಮೊತ್ತವು ಆಯುಕ್ತರ ಲೆಕ್ಕ ಶೀರ್ಷಿಕೆಯಲ್ಲಿ ಜಮೆಯಾಗಿರುತ್ತದೆ.

ಈ ರೀತಿ ಪ್ರತಿ ವರ್ಷ ಸಂಗ್ರಹವಾಗುವ ಮೊತ್ತದಲ್ಲಿ ರೂ.20 ಕೋಟಿಯ ವೆಚ್ಚದ ಮಿತಿಯಲ್ಲಿ ಆಯಾ ವರ್ಷ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪ್ರತಿ ಶೀರ್ಷಿಕೆಯ ತಲಾ 300 ಪ್ರತಿಗಳನ್ನು ಅಥವಾ ರೂ.2.50 ಲಕ್ಷ ಮಿತಿಯಂತೆ ಖರೀದಿಸುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಈ ಮೂಲಕ ರಾಜ್ಯದ ಎಲ್ಲಾ ಲೇಖಕರು, ಲೇಖಕ ಪ್ರಕಾಶಕರು, ಪ್ರಕಾಶನ ಸಂಸ್ಥೆಗಳ ಪರವಾಗಿ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ.

ಈ ಬಗ್ಗೆ ಮಾನ್ಯ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿ ನೆನೆಗುದಿಗೆ ಬಿದ್ದಿರುವ ಏಕಗವಾಕ್ಷಿ ಯೋಜನೆಗೆ ಮರುಚಾಲನೆ ನೀಡಬೇಕಾಗಿ ಕಳಕಳಿಯಿಂದ ವಿನಂತಿಸುತ್ತೇವೆ.

(3) ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸೃಜಿಸಲಾದ 5766+330 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಸರ್ಕಾರದ ಆದೇಶ ಸಂಖ್ಯೆ: ED 64 LIB 2015 ದಿನಾಂಕ: 26-02-2019ರ ಮೂಲಕ ಹೆಚ್ಚಿನ ಕೆಲಸದ ಒತ್ತಡವಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ವರ್ಗಾಯಿಸಲಾಗಿದೆ.

ಆದರೆ ನಿರ್ವಹಣೆ ಸರಿಯಾಗಿಲ್ಲದೆ, ಸಾರ್ವಜನಿಕರಿಗೆ ಗ್ರಂಥಾಲಯಗಳ ಸೇವೆ ಸರಿಯಾಗಿ ಸಿಗುತ್ತಿಲ್ಲ, ಹಲವು ಮೇಲ್ವಿಚಾರಕರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ದಿನಾಂಕ: 15-05-2026 ವಿಜಯ ಕರ್ನಾಟಕ ಪತ್ರಿಕೆಯಲ್ಲಿ “6500 ಗ್ರಾಮೀಣ ಗ್ರಂಥಾಲಯಗಳು ಸ್ಥಗಿತ”** ಎಂಬ ಶೀರ್ಷಿಕೆಯಡಿ 6 ತಿಂಗಳಿಂದ ಬಾಗಿಲು ತೆರೆಯದ ಜ್ಞಾನ ದೇಗುಲಗಳು ಎಂದು ಪ್ರಕಟವಾಗಿದೆ.

ಇದರಿಂದಾಗಿ ಗ್ರಾಮೀಣ ಭಾಗದ ನಿರೀಕ್ಷೆಗೆ ಹಿನ್ನಡೆಯಾಗಿರುವುದನ್ನೆಲ್ಲಾ ಪರಾಮರ್ಶಿಸಿ ಗ್ರಂಥಾಲಯಗಳಿಗಾಗಿಯೇ ಇರುವ ‘ಸಾರ್ವಜನಿಕ ಗ್ರಂಥಾಲಯ ಇಲಾಖೆ’ಗೆ ಮತ್ತೆ ಅವುಗಳನ್ನು ವರ್ಗಾಯಿಸುವ ಮೂಲಕ ಇಲಾಖೆಯನ್ನು ಬಲಪಡಿಸಿ, ಜ್ಞಾನದ ಅರಿವನ್ನು ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಮೂಲಕ ಏಕಗವಾಕ್ಷಿ ಸಗಟು ಪುಸ್ತಕ ಖರೀದಿ ಯೋಜನೆಯನ್ನು ಜಾರಿಗೆ ತಂದು ಪುಸ್ತಕ ಸಂಸ್ಕೃತಿಗೆ ಒತ್ತು ನೀಡಲು ಕಳಕಳಿಯಿಂದ ಒತ್ತಾಯಿಸುತ್ತಿದ್ದೇವೆ.

2. ವಾರ್ಷಿಕ ಕ್ರಿಯಾ ಯೋಜನೆ (ಬಜೆಟ್)

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಾರ್ಷಿಕ ಬಜೆಟ್ ಅನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಲೆಕ್ಕಪತ್ರಗಳ ನಿಯಮಾವಳಿಗಳು 1975ರ ಅಧ್ಯಾಯ-11, ಬಜೆಟ್ ಉಪನಿಯಮ 30(A), (B), (C) ಪ್ರಕಾರ ಪ್ರತಿಯೊಂದು ಜಿಲ್ಲಾ/ನಗರ ಗ್ರಂಥಾಲಯಗಳು ಮುಂದಿನ ವರ್ಷಕ್ಕಾಗಿ ನಿರೀಕ್ಷಿತ ಸ್ವೀಕೃತಿ ಮತ್ತು ಉದ್ದೇಶಿತ ಖರ್ಚುಗಳ ಅಂದಾಜನ್ನು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಸಂಬಂಧಿಸಿದ ಪ್ರಾಧಿಕಾರ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು, ಅನುಮೋದಿತ ಬಜೆಟ್ ಪ್ರತಿಗಳನ್ನು ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಇವರಿಗೆ ಅನುಮೋದನೆಗಾಗಿ ಕಳುಹಿಸಬೇಕು ಎಂದು ನಮೂದಾಗಿದೆ.

ಅಲ್ಲದೆ ಸರ್ಕಾರದ ಆದೇಶ ಸಂಖ್ಯೆ: DE 08 TFP 2023 ದಿನಾಂಕ: 28-10-2024ರ ಪ್ರಕಾರ ಆರ್ಥಿಕ ಇಲಾಖೆಯು ಇಲಾಖಾ ಮುಖ್ಯಸ್ಥರಿಗೆ ಪ್ರತ್ಯಾಯೋಜಿಸಲಾದ ಹಣಕಾಸಿನ ಅಧಿಕಾರದ ಮಿತಿಯೊಳಗೆ ರೂ.2.00 ಕೋಟಿಯವರೆಗೆ ಇರುವ ಬಜೆಟ್‌ಗಳನ್ನು ಮಾನ್ಯ ಆಯುಕ್ತರೇ ಅನುಮೋದನೆ ನೀಡಿ ಸಂಬಂಧಿಸಿದ ಜಿಲ್ಲಾ/ನಗರ ಗ್ರಂಥಾಲಯಗಳಿಗೆ ಕಳುಹಿಸಬಹುದಾಗಿರುತ್ತದೆ.

ರೂ.5.00 ಕೋಟಿಯ ಮಿತಿಯೊಳಗಿರುವ ಬಜೆಟ್‌ಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅನುಮೋದಿಸಿ ನಿಗದಿತ ಅವಧಿಯೊಳಗೆ ಅನುಮೋದನೆ ನೀಡಬಹುದಾಗಿರುತ್ತದೆ. ರೂ.5.00 ಕೋಟಿಗೂ ಹೆಚ್ಚಿನ ಮೊತ್ತದ ಬಜೆಟ್ ಅನುಮೋದನೆಗೆ ಆರ್ಥಿಕ ಇಲಾಖೆ ಮತ್ತು ಸಂಬಂಧಿಸಿದ ಸಚಿವರ ಅನುಮೋದನೆ ಅವಶ್ಯಕವಾಗಿರುತ್ತದೆ ಎಂದು ಆದೇಶವಾಗಿದೆ.

ಆದ್ದರಿಂದ ದಯಮಾಡಿ ನಿಯಮಾನುಸಾರ ಮೇ ಅಥವಾ ಜೂನ್ ತಿಂಗಳಲ್ಲಿ ಕ್ರಿಯಾ ಯೋಜನೆಯನ್ನು ಅನುಮೋದಿಸಲು ಕೋರುತ್ತೇವೆ.

3. ಪುಸ್ತಕ ಖರೀದಿ ವಿಧಾನದಲ್ಲಿ ಪರಿಷ್ಕರಣೆ

ಸರ್ಕಾರದ ಆದೇಶದ ಸಂಖ್ಯೆ EP 105 LIB 2025 ದಿನಾಂಕ: 18.02.2026, ಸರ್ಕಾರದ ತಿದ್ದುಪಡಿ ಸಂಖ್ಯೆ EP 105 LIB 2025 ದಿನಾಂಕ: 18.02.2026ರ ಆದೇಶದನ್ವಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕಗಳ ಆಯ್ಕೆ ಮತ್ತು ಖರೀದಿಯ ಮಾರ್ಗಸೂಚಿಗಳನ್ನು ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು, ಸಾಹಿತ್ಯ ಚಿಂತಕರನ್ನು, ಹಿರಿಯ ಸಾಹಿತಿಗಳ ಅಭಿಪ್ರಾಯಗಳನ್ನು ಪಡೆಯದೆ ಪರಿಷ್ಕರಿಸಲಾಗಿದೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇಂತಹ ಭಾಷೆಯ ಪುಸ್ತಕಗಳನ್ನು 2022ನೇ ಸಾಲಿನಿಂದಲೂ ಗ್ರಂಥಾಲಯಗಳಿಗೆ ಖರೀದಿಸದೆ, ಖರೀದಿಸಿರುವ ಪುಸ್ತಕಗಳಿಗೆ ಹಣ ಪಾವತಿಸದೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅಗತ್ಯವಾದ ಹೊಸ ಪುಸ್ತಕಗಳನ್ನು ಖರೀದಿಸಲು ಸರ್ಕಾರದ ಆದೇಶ ಸಂಖ್ಯೆ: ED 1 LIBP 2004 ದಿನಾಂಕ: 07-02-2005ರ ಆದೇಶದಲ್ಲಿರುವ ಅನುಬಂಧ-1ರ ಕಂಡಿಕೆ (17) ಮತ್ತು (20)ರ ಪ್ರಕಾರ ಪುಸ್ತಕ ಆಯ್ಕೆ ಸಮಿತಿಗೆ ಅಧಿಕಾರವಿತ್ತು.

ಇದರ ಜೊತೆಗೆ ಅದೇ ಸರ್ಕಾರದ ಆದೇಶದ ಉಲ್ಲೇಖ (3)ರ ಪ್ರಕಾರ ಮುಖ್ಯ ಗ್ರಂಥಾಲಯಾಧಿಕಾರಿಗಳ ವಿವೇಚನಾ ಕೋಟಾದಲ್ಲಿ ಶೇ.75ರಷ್ಟು ಸ್ಪರ್ಧಾತ್ಮಕ, ಪಠ್ಯಪುಸ್ತಕ, ಪರಾಮರ್ಶನ, ಸ್ಥಳೀಯ ಬೇಡಿಕೆಯ ಪುಸ್ತಕಗಳನ್ನು ಖರೀದಿಸಲು ಅವಕಾಶವಿತ್ತು.

ಆದರೆ ಇವುಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದೆ ಏಕಕಡತದ ಮೂಲಕ ಒಟ್ಟು ಹಣದಲ್ಲಿ ಶೇ.40ರಷ್ಟು ಸ್ಪರ್ಧಾತ್ಮಕ, ಪಠ್ಯಪುಸ್ತಕ, ಪರಾಮರ್ಶನ, ಓದುಗರ ಬೇಡಿಕೆಗಳಿಗೆ K.P.T.T. ಕಾಯ್ದೆ ಮತ್ತು ನಿಯಮಗಳನ್ವಯ ಪಾರದರ್ಶಕ ಟೆಂಡರ್ ಮೂಲಕ ಪುಸ್ತಕಗಳನ್ನು ಖರೀದಿಸಲು ಆದೇಶ ಹೊರಡಿಸಿರುತ್ತಾರೆ.

ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗಾಗಿ ಹೆಚ್ಚೆಚ್ಚಾಗಿ ಪ್ರಕಟವಾಗುತ್ತಿರುವ ಕನ್ನಡ ಸಾಹಿತ್ಯದ ಪುಸ್ತಕಗಳ ಖರೀದಿಯನ್ನು ಹಾಲಿ ಇರುವ ಶೇ.40ರಿಂದ 20ಕ್ಕೆ ಇಳಿಸಿರುವುದು ಪ್ರಶ್ನಾರ್ಹವಾಗಿದೆ. 2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಕನ್ನಡ ಸಾಹಿತ್ಯಕ್ಕೆ ಅನ್ಯಾಯವಾಗುತ್ತದೆ.

ಸರ್ಕಾರದ ಆದೇಶ ಸಂಖ್ಯೆ: EP 105 LIB 2025 ದಿನಾಂಕ: 18.02.2026ರ ಆದೇಶವನ್ನು ರದ್ದುಪಡಿಸಲು ಹಾಗೂ ಹಿಂದಿನ ಆದೇಶದಂತೆ ಪುಸ್ತಕ ಖರೀದಿಸಲು ವಿನಂತಿಸುತ್ತಿದ್ದೇವೆ.

ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಟಿಪ್ಪಣಿ ಕಳುಹಿಸಿದ್ದಾರೆ. ಉನ್ನತ ಮಟ್ಟದ ಆಯ್ಕೆ ಸಮಿತಿಯೇ ಪುಸ್ತಕದ ಅಂಗಡಿ, ಪುಸ್ತಕ ಪ್ರದರ್ಶನಗಳಿಗೆ ಭೇಟಿ ನೀಡಿ ಅಗತ್ಯವಿರುವ ಪುಸ್ತಕಗಳನ್ನು ಆಯ್ಕೆ ಮಾಡಿ, ಖರೀದಿಸುವಂತೆ ಸೂಚಿಸಬೇಕು.

ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಟೆಂಡರ್ ಮೂಲಕ ಖರೀದಿಸುವುದನ್ನು ರದ್ದುಪಡಿಸಬೇಕು. ಪುಸ್ತಕಗಳು ಸರಕಲ್ಲ ಜ್ಞಾನ.

4. ಬೆಲೆ ನಿಗದಿ

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರಂಥಾಲಯಗಳಲ್ಲಿ ದಿನಾಂಕ: 01-04-2018ರಿಂದ ಮುದ್ರಣಗೊಳ್ಳುವ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಅನ್ವಯ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸರಬರಾಜಾಗುವ ಪುಸ್ತಕಗಳ ಪ್ರತಿ ಪುಟಕ್ಕೆ 20 ಪೈಸೆಯನ್ನು ಹೆಚ್ಚಿಸಿ ಸರ್ಕಾರವು ಅನುಮೋದನೆ ನೀಡಿರುತ್ತದೆ.

ಪುಸ್ತಕಗಳ ಬೆಲೆಯನ್ನು ಹೆಚ್ಚಿಸಿ ಈಗಾಗಲೇ 8 ವರ್ಷಗಳು ಕಳೆದಿದ್ದು, ಮುದ್ರಣ ಮತ್ತು ಮುದ್ರಣಕ್ಕೆ ಬೇಕಾದ ಎಲ್ಲಾ ಪರಿಕರಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಮುದ್ರಣಕ್ಕೆ ಬಳಸುವ ಕಾಗದದ ಬೆಲೆ ಕಳೆದ 8 ವರ್ಷಗಳಲ್ಲಿ ಶೇ.60ರಷ್ಟು ಏರಿಸಲಾಗಿದೆ. ಕಾಗದದ ಜಿಎಸ್‌ಟಿಯನ್ನು 12%ರಿಂದ 18%ಗೆ ಏರಿಸಲಾಗಿದೆ. ವಿದ್ಯುತ್ ಶಕ್ತಿ ಬಿಲ್ಲುಗಳನ್ನು ಶೇ.50% ಏರಿಸಲಾಗಿದೆ.

ಮುದ್ರಣಕ್ಕೆ ಬಳಸುವ ಇಂಕು, ಬೈಡಿಂಗ್, ಕೂಲಿ, ಸಾಗಾಣಿಕೆ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಪುಸ್ತಕ ಪ್ರಕಟಣೆ ಕಷ್ಟ ಸಾಧ್ಯವಾಗಿದೆ.

ಆದ್ದರಿಂದ ದಯಮಾಡಿ ಪ್ರತಿ ಪುಟಕ್ಕೆ 50 ಪೈಸೆ ಹೆಚ್ಚಿಸಲು ಹಾಗೂ ಇನ್ನು ಮುಂದೆ ಪ್ರತಿ 2 ವರ್ಷಗಳಿಗೆ ಗ್ರಂಥಾಲಯ ಇಲಾಖೆಗೆ ಖರೀದಿಸುವ ಎಲ್ಲಾ ಭಾಷೆಗಳ ಪುಸ್ತಕಗಳ ಬೆಲೆಯಲ್ಲಿ ಶೇ.10% ಹೆಚ್ಚಿಸಲು ಕ್ರಮಕೈಗೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇವೆ.

5. ಪುಸ್ತಕ ಖರೀದಿ ಮತ್ತು ಆಯ್ಕೆ

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ 2022ನೇ ಸಾಲಿನ ಪುಸ್ತಕ ಖರೀದಿ ಹಾಗೂ 2023, 2024, 2025ನೇ ಸಾಲಿನ ಪುಸ್ತಕಗಳ ಆಯ್ಕೆ ಮತ್ತು ಖರೀದಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಿ ‘ಒಂದು ಬಾರಿ ವಿಶೇಷ ಖರೀದಿ’ ಎಂದು ಪರಿಗಣಿಸಿ ಹಿಂದಿನ ಸಾಲಿನ ಪುಸ್ತಕಗಳ ಆಯ್ಕೆ ಮತ್ತು ಖರೀದಿ ಮುಗಿಸಿ ಓದುಗರಿಗೆ ನೀಡಿದರೆ, ಮುಂದೆ ಆಯಾ ವರ್ಷದಲ್ಲಿಯೇ ಹೊಸ ಪುಸ್ತಕಗಳು ಓದುಗರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಸಿಗುವಂತಾಗಲು ಸಹಕಾರಿಯಾಗುತ್ತದೆ.

ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲು ವಿನಂತಿಸುತ್ತಿದ್ದೇವೆ.

ಆಯ್ಕೆಯಾದ ಪುಸ್ತಕಗಳನ್ನು ಖರೀದಿಸಲು ಅಧಿಕಾರಿಗಳು ಸ್ಥಳಾವಕಾಶವಿಲ್ಲ, ಬ್ರಾಂಚ್‌ಗಳಿಗೆ ಸಾಗಾಣಿಕೆ ಮಾಡಿಲ್ಲ ಇತ್ಯಾದಿ ಕಾರಣಗಳನ್ನು ಹೇಳುವ ಬದಲು, ನಿಯಮಾನುಸಾರ 10 ವರ್ಷಗಳಾದ ಹಳೆಯದಾದ ಅನುಪಯುಕ್ತ ಪುಸ್ತಕಗಳನ್ನು ಪ್ರತಿ ವರ್ಷ ವೀಡೌಟ್ ಮಾಡಬೇಕು ಹಾಗೂ ಖರೀದಿಸಿದ ಪುಸ್ತಕಗಳನ್ನು ಬ್ರಾಂಚ್‌ಗಳಿಗೆ ಸಾಗಾಣಿಕೆ ಮಾಡಿ ಓದುಗರಿಗೆ ನೀಡುವಂತೆ ತಾವು ಕ್ರಮ ತೆಗೆದುಕೊಳ್ಳಲು ವಿನಂತಿಸುತ್ತಿದ್ದೇವೆ.

6. ಸ್ಥಗಿತಗೊಂಡಿರುವ ಯೋಜನೆಗಳು

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಈಗಾಗಲೇ ಸ್ಥಗಿತವಾಗಿರುವ ಹೊಂದಾಣಿಕೆ ನೆರವಿನ (Matching grant) ‘ರಾಜಾರಾಮ್ ಮೋಹನ್ ರಾಯ್ ಫೌಂಡೇಶನ್’ ಪುಸ್ತಕ ಖರೀದಿ ಯೋಜನೆ ಹಾಗೂ ಹರಿಜನ ಗಿರಿಜನ ಕ್ಷೇತ್ರಗಳ (SCP/TSP) ಯೋಜನೆ ಪುಸ್ತಕ ಖರೀದಿಯನ್ನು ಜರೂರಾಗಿ ಪ್ರಾರಂಭಿಸಬೇಕು.

7. ಕಾಯ್ದೆಗಳಿಗೆ ತಿದ್ದುಪಡಿ

60 ವರ್ಷಗಳ ಹಿಂದೆ ರಚಿಸಿರುವ 1965ರ ಆಕ್ಟ್ ‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಕಾಯ್ದೆ’ಗಳಿಗೆ ತಿದ್ದುಪಡಿ ತರಬೇಕು.

ಸರ್ಕಾರದ ಆದೇಶ ಸಂಖ್ಯೆ: ED 1 LIBP 2004 ದಿನಾಂಕ: 7-02-2005ರ ಅನುಬಂಧ-1,2,3ಕ್ಕೆ ತಜ್ಞರ, ಲೇಖಕರ, ಪ್ರಕಾಶಕರ ಅಭಿಪ್ರಾಯ ಪಡೆದು ತಿದ್ದುಪಡಿ ಆದೇಶ ಹೊರಡಿಸಲು ಕೋರುತ್ತಿದ್ದೇವೆ.

8. ಹೊಸ ಗ್ರಂಥಾಲಯಗಳ ಯೋಜನೆ

ನಗರಗಳಲ್ಲಿ ವಾರ್ಡ್‌ಗೆ ಒಂದರಂತೆ, ಗ್ರಾಮೀಣ ಪ್ರದೇಶಗಳಲ್ಲಿ ಹೋಬಳಿಗೊಂದರಂತೆ ಗ್ರಂಥಾಲಯ ಮತ್ತು ಜಿಲ್ಲಾ ಕೇಂದ್ರ ಹಾಗೂ ಶಾಸಕರ ಕ್ಷೇತ್ರಗಳಿಗೆ ಒಂದರಂತೆ ಆಧುನಿಕ ತಂತ್ರಜ್ಞಾನದಿಂದ ಕೂಡಿದ ವಿಶಾಲವಾದ ಹೈಟೆಕ್ ಗ್ರಂಥಾಲಯಗಳನ್ನು ನಿರ್ಮಿಸಬೇಕು.

ಗ್ರಂಥಾಲಯ ಸ್ನೇಹಿ ವಾತಾವರಣವನ್ನು ರೂಪಿಸಬೇಕು. ಅದು ಓದುಗರನ್ನು ಆಕರ್ಷಿಸುವಂತಿರಬೇಕು.

ಕಾಲಕಾಲಕ್ಕೆ ಲೇಖಕರು, ಪ್ರಕಾಶಕರು, ಓದುಗರು, ಚಿಂತಕರನ್ನು ಆಹ್ವಾನಿಸಿ ಗ್ರಂಥಾಲಯಗಳ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಚರ್ಚಿಸಿ ಆತ್ಮೀಯ ವಾತಾವರಣವನ್ನು ನಿರ್ಮಾಣ ಮಾಡಬೇಕು.

9. ಗ್ರೇಟರ್ ಬೆಂಗಳೂರು (GBA) ಪ್ರಾಧಿಕಾರಕ್ಕೆ

ವಲಯವಾರು ಗ್ರಂಥಾಲಯಗಳ ಹಂಚಿಕೆ ಪ್ರಕ್ರಿಯೆಗೆ ಶೀಘ್ರವಾಗಿ ಪ್ರಸ್ತಾವನೆಯನ್ನು ಇಲಾಖೆಯಿಂದ ಸಲ್ಲಿಸಬೇಕು.

10. ಸಾರ್ವಜನಿಕ ಗ್ರಂಥಾಲಯ ಇಲಾಖೆ

ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು, ಸಾಹಿತಿಗಳು, ಪ್ರಕಾಶಕರು, ಓದುಗರು ಇವರಿಗೆಲ್ಲರಿಗೂ ಸಲಹೆ, ಸೂಚನೆ, ಪರಿಹಾರಗಳನ್ನು ನೀಡಲು ಹಾಗೂ ಇಲಾಖಾ ಸಿಬ್ಬಂದಿ, ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಅವಶ್ಯವಾಗಿ ಬೇಕಾಗಿರುವ, ಖಾಲಿ ಇರುವ ‘ನಿರ್ದೇಶಕ’ರ ಹುದ್ದೆಯನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಕೋರುತ್ತೇವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಸರ್ವಶಿಕ್ಷಣ ಕೇಂದ್ರಗಳ ಪುಸ್ತಕ ಆಯ್ಕೆ ಮತ್ತು ಖರೀದಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿರುವಂತೆ ಉನ್ನತ ಮಟ್ಟದ ಆಯ್ಕೆ ಸಮಿತಿಗಳನ್ನು ರಚಿಸಿ, ಏಕದಳ ಪದ್ಧತಿಯನ್ನು ಜಾರಿಗೆ ತಂದು ಪಾರದರ್ಶಕವಾಗಿ ಪುಸ್ತಕ ಆಯ್ಕೆ ಮತ್ತು ಖರೀದಿ ನಡೆಯುವಂತೆ ಕ್ರಮ ಜರುಗಿಸಲು ವಿನಂತಿಸುತ್ತೇವೆ.

ಮೇಲಿನ ಹತ್ತು ಅಂಶಗಳನ್ನು ರಾಜ್ಯದ ಮುಖ್ಯಮಂತ್ರಿಯವರು ಪರಾಮರ್ಶಿಸಿ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸುವ ಮೂಲಕ ಜ್ಞಾನಪ್ರಸಾರದಲ್ಲಿ ನಿರಂತರವಾಗಿರುವ ನಮಗೆ ಪುಸ್ತಕ ಸಂಸ್ಕೃತಿಯನ್ನು ಪೋಷಿಸಲು ಪ್ರೋತ್ಸಾಹಿಸಬೇಕಾಗಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ.

ಕನ್ನಡ ಪುಸ್ತಕ ಸಂಸ್ಕೃತಿಯ ಸರ್ವತೋಮುಖ ಅಭಿವೃದ್ಧಿ ಹಾಗೂ ಪುಸ್ತಕ ಪ್ರೀತಿಯನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿರುವ ಸಂಘದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ ಸಹಕರಿಸಬೇಕೆಂದು ಘನ ಸರ್ಕಾರವನ್ನು, ಸಾಹಿತ್ಯಾಭಿಮಾನಿಗಳನ್ನು ಹಾಗೂ ಸರ್ವ ಸದಸ್ಯರನ್ನು ಪ್ರೀತಿಯಿಂದ ವಿನಂತಿಸುತ್ತೇವೆ.