+91 94487 53991    +91 86606 36951    barahagararaprakashakarasangha@gmail.com

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)

  1. ಉದಯೋನ್ಮುಖ ಬರಹಗಾರರ ಕೃತಿಗಳ ಪ್ರಕಟಣೆ :

    ಉದಯೋನ್ಮುಖ ಬರಹಗಾರರ ಆಯ್ದ ಕೃತಿಗಳನ್ನು ಪ್ರಕಟಿಸುವ ಹಾಗೂ ಕೃತಿಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಹಲವು ಲೇಖಕ/ಲೇಖಕಿಯರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುತ್ತಿದ್ದೇವೆ.

  2.  ನೂರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೂರು-ನೂರು ಮಕ್ಕಳ ಪುಸ್ತಕಗಳ ವಿತರಣಾ ಯೋಜನೆ :

    ಪ್ರತಿ ವರ್ಷವೂ ಈ ಯೋಜನೆಯಡಿ ಪಠ್ಯೇತರ ಮಕ್ಕಳ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಧಾರವಾಡ, ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳ 800 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 80,000 ಉಪಯುಕ್ತ ಮಕ್ಕಳ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ‘ಪುಸ್ತಕ ಪ್ರೀತಿ’ ಬೆಳೆಸಲು ಸಹಕಾರಿಯಾಗಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಪ್ರತಿವರ್ಷವೂ ಪುಸ್ತಕಗಳನ್ನು ದಾನರೂಪದಲ್ಲಿ ನೀಡುತ್ತಾ ಬಂದಿರುವ ಸಂಘ ಸಂಸ್ಥೆಗಳ ಜೊತೆಗೆ ಸಪ್ನಾ ಬುಕ್ ಹೌಸ್, ನವಕರ್ನಾಟಕ, ಅಂಕಿತ ಪುಸ್ತಕ, ವಸಂತ ಪ್ರಕಾಶನ, ಹೇಮಂತ ಸಾಹಿತ್ಯ, ಗೀತಾಂಜಲಿ ಪಬ್ಲಿಕೇಷನ್ಸ್, ಐಬಿಹೆಚ್ ಪ್ರಕಾಶನ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ದಿವ್ಯಚಂದ್ರ ಪ್ರಕಾಶನ, ಅಕ್ಷರ ಮಂಟಪ, ಕಣ್ವ ಪ್ರಕಾಶನ, ನಿರಂತರ ಪ್ರಕಾಶನ, ರೂಪ ಪ್ರಕಾಶನ, ಸಂವಹನ, ತನುಮನು ಪ್ರಕಾಶನ ಮುಂತಾದವರೆಲ್ಲರಿಗೂ ಹಾಗೂ ಹಲವಾರು ಪುಸ್ತಕದ ದಾನಿಗಳು ಸಂತೋಷದಿಂದ ಈ ಯೋಜನೆಗೆ ಪುಸ್ತಕಗಳನ್ನು ಖರೀದಿಸಿ ನೀಡುವ ಮೂಲಕ ಸಹಕರಿಸುತ್ತಿದ್ದಾರೆ. ಅವರ ಸಹಕಾರವನ್ನು ಮುಂದೆಯೂ ಬಯಸುತ್ತಾ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.   ಮಕ್ಕಳಲ್ಲಿ ‘ಪುಸ್ತಕ ಪ್ರೀತಿ’ ಹಾಗೂ ‘ಕಥಾ ರಚನೆ’ಯನ್ನು ಉತ್ತೇಜಿಸುವ ಸಲುವಾಗಿ ಅತ್ಯುತ್ತಮ ಕಥಾರಚನೆಗಾಗಿ ಮುಂದಿನ ವರ್ಷಗಳಲ್ಲಿ ನಾವು ನೀಡುವ ನೂರು ಶಾಲೆಗಳಿಗೆ ನೂರು-ನೂರು ಪುಸ್ತಕ ಯೋಜನೆಗೆ ಆಯ್ಕೆಯಾಗುವ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳ ಮಕ್ಕಳಿಗೆ ಕಥೆಗಳನ್ನು ರಚಿಸುವ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮ ಕಥಾರಚನೆಗಾಗಿ ಪ್ರಥಮ ಬಹುಮಾನ ರೂ. 5,000/-ನಗದು, ದ್ವಿತೀಯ ಬಹುಮಾನ ರೂ.3,000/- ಹಾಗೂ ತೃತೀಯ ಬಹುಮಾನ ರೂ. 2,000/- ಮತ್ತು ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸುವ ಜೊತೆಗೆ ಅತ್ಯುತ್ತಮ ಕಥೆಗಳನ್ನು ಕ್ರೂಢೀಕರಿಸಿ ಮಕ್ಕಳ ಕಥಾ ಸಂಕಲನವನ್ನು ಪ್ರಕಟಿಸುವ ಹೊಸ ಯೋಜನೆಯನ್ನು ಆರಂಭಿಸಲಾಗುವುದು. ಇದಕ್ಕೆ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಯೋಜನೆಗೆ ಸಹಕಾರ ನೀಡಲು ಕೋರುತ್ತೇವೆ.

  3. ವಾರ್ಷಿಕ ಪ್ರಶಸ್ತಿಗಳು:

    ಮೌಲಿಕ ಗುಣಮಟ್ಟದ ಕೃತಿಗಳನ್ನು ಬರೆಯುವ ಹಾಗೂ ಪ್ರಕಟಿಸುವ ಲೇಖಕ, ಲೇಖಕಿ, ಯುವ ಲೇಖಕ, ಲೇಖಕಿ, ಪ್ರಕಾಶಕರು ಹಾಗೂ ಮುದ್ರಕರಿಗೆ ಅಲ್ಲದೇ ಸಾರ್ವಜನಿಕ ಗ್ರಂಥಾಲಯವನ್ನು ಉತ್ತಮವಾಗಿ ನಿರ್ವಹಿಸುವ ಗ್ರಂಥಪಾಲಕರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವ ಸಲುವಾಗಿ ‘ಸಾಹಿತ್ಯರತ್ನ’, ‘ಯುವ ಸಾಹಿತ್ಯ ರತ್ನ’, ‘ಪುಸ್ತಕ ರತ್ನ’ ಹಾಗೂ ‘ಮುದ್ರಣ ರತ್ನ’ ಪ್ರಶಸ್ತಿಗಳ ಜೊತೆ ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ನಗದು ಬಹುಮಾನಗಳನ್ನು ನೀಡುತ್ತಾ ಬಂದಿದ್ದೇವೆ ಮತ್ತಷ್ಟು ಜನರಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದ್ದೇವೆ.

  4.  ಬರಹಗಾರ / ಪ್ರಕಾಶಕರ ಕಮ್ಮಟ ‘ಮಾಸದ ಮಾತುಕತೆ’ ಯೋಜನೆ :

    2022-23ನೇ ಸಾಲಿನಲ್ಲಿ 3 ಕಮ್ಮಟಗಳು ನಡೆದವು. ಮೌಲ್ಯಯುತ ಪುಸ್ತಕ ಬರೆಯುವ ಹಾಗೂ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಹಕಾರಿಯಾಗುವಂತೆ ಇಂದಿನ ಯುವಜನರಿಗೆ ಕಮ್ಮಟ ಹಾಗೂ ಶಿಬಿರಗಳನ್ನು ಏರ್ಪಡಿಸಿ ತಜ್ಞರಿಂದ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

  5. ಸಂಘದ ಚಟುವಟಿಕೆಗಳನ್ನು ರಾಜ್ಯವ್ಯಾಪಿ ಸಂಘಟಿಸುವುದು :

    ರಾಜ್ಯಾದ್ಯಂತ ಸಂಘದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸುವಂತಾಗಲು ಜಿಲ್ಲೆಗೆ ಒಬ್ಬರು ಅಥವಾ ಇಬ್ಬರಂತೆ ಕೇಂದ್ರ ಸಂಘದ ಪ್ರತಿನಿಧಿಗಳನ್ನು ಪ್ರತಿ ಜಿಲ್ಲೆಗಳಲ್ಲಿಯೂ ನೇಮಕ ಮಾಡಿ, ಸದಸ್ಯತ್ವದ ಆಂದೋಲನದ ಮುಖೇನ ಹೆಚ್ಚು ಸದಸ್ಯರನ್ನು ಸೇರಿಸಿಕೊಂಡು ಸಂಘದ ಯೋಜನೆಗಳನ್ನು ಪ್ರತಿ ಜಿಲ್ಲೆ, ತಾಲ್ಲೂಕುಗಳಿಗೂ ತಲುಪಿಸುವ ಕಾರ್ಯ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

  6. ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡ ಇತರರನ್ನು ಗೌರವಿಸುವುದು:

    2023ನೇ ಸಾಲಿನ ವಿಶ್ವ ಪುಸ್ತಕ ದಿನದಿಂದ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡಿ ರುವ ಮುಖಪುಟ ವಿನ್ಯಾಸಕರು, ಕರಡು ತಿದ್ದುವವರು, ಡಿಟಿಪಿ ಮಾಡುವವರು, ಪುಸ್ತಕಗಳನ್ನು ಮುದ್ರಿಸುವ ಮುದ್ರಣಕಾರರು, ಬೈಂಡರ್‌ಗಳು ಹಾಗೂ ಕನ್ನಡ ಪುಸ್ತಕ ಪರಿಚಾರಕರನ್ನು ಗುರುತಿಸಿ ಅವರಿಗೆ ಗೌರವಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ.

  7. ಹಾರದ ಬದಲು ಪುಸ್ತಕ ಕೊಡುಗೆ :

    ಸಭೆ ಸಮಾರಂಭಗಳಲ್ಲಿ ಹಾರದ ಬದಲು ಪುಸ್ತಕಗಳನ್ನು ಬಳುವಳಿಯಾಗಿ ನೀಡುವ ಮೂಲಕ ಪುಸ್ತಕ ಪ್ರೀತಿಯನ್ನು ಬೆಳೆಸುವುದು.

  8. ಆರ್ಥಿಕ ನೆರವು :

    ಬರಹಗಾರರು, ಪ್ರಕಾಶಕರು ಹಾಗೂ ಪುಸ್ತಕೋದ್ಯಮದ ಬಂಧುಗಳು ಸಂಕಷ್ಟದಲ್ಲಿದ್ದಾಗ ಅಲ್ಪ ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದೇವೆ.

ಕೃತಜ್ಞತೆಗಳು

ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಂಘದ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಸರ್ಕಾರಕ್ಕೆ ಆಭಾರಿಯಾಗಿದ್ದೇವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇವರೆಲ್ಲರೂ ಬರಹಗಾರರು, ಪ್ರಕಾಶಕರು ಹಾಗೂ ಓದುಗರಿಗೆ ತೋರುತ್ತಿರುವ ಕಾಳಜಿಗೆ ಕೃತಜ್ಞತೆಗಳು.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಘದ ಕಾರ್ಯಕ್ರಮಗಳಿಗಾಗಿ ಧನ ಸಹಾಯವನ್ನು ನೀಡುತ್ತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಆದಾಯ ತೆರಿಗೆ ಇಲಾಖೆಯಿಂದ ಸಂಘದ ಧ್ಯೇಯೋದ್ದೇಶಗಳಿಗಾಗಿ ಸಂಗ್ರಹಿಸುವ ವಂತಿಕೆ ಹಣದ ಮೇಲೆ ಆದಾಯ ತೆರಿಗೆಯಲ್ಲಿ 12ಎಎ ಮತ್ತು 80ಜಿ ಕಲಂನಂತೆ ವಿನಾಯಿತಿ ನೀಡಿ ಸಂಘದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿರುವ ಆದಾಯ ತೆರಿಗೆ ಇಲಾಖೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಿ.ಆರ್. ನುಲ್ಟಿ ಅಂಡ್ ಅಸೋಸಿಯೇಟ್ಸ್ ರವರಿಗೂ ಧನ್ಯವಾದಗಳು.

ಸಂಘದ ಕಾರ್ಪಸ್ ಫಂಡ್‌ಗೆ ಕೊಡುಗೆಯಾಗಿ ಆರ್ಥಿಕ ನೆರವು ನೀಡಿರುವ ನಾಡೋಜ ಡಾ.ಕಮಲಾ ಹಂಪನಾ, ಮಂಡ್ಯ ನಗರದ ಶಾಸಕರಾಗಿದ್ದ ಶ್ರೀ ಎಂ.ಶ್ರೀನಿವಾಸ, ಲಯನ್ ಶ್ರೀ ಬಿ.ಆರ್.ಅಶೋಕ್ ಕುಮಾರ್‌, ಸಪ್ನ ಬುಕ್ ಹೌಸ್ ನ ಶ್ರೀ ನಿತಿನ್ ಎಸ್.ಷಾ, ಹಾಗೂ ಕೆಲವು ಪದಾಧಿಕಾರಿ ಮಿತ್ರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಸಂಘದ ಕಾರ್ಯಕ್ರಮಗಳಿಗೆ ಹಿಂದಿನಿಂದಲೂ ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಾ ಬಂದಿರುವ ಹಿರಿಯ ಸಾಹಿತಿಗಳಾದ ಡಾ. ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶ್ರೀ ಜಾಣಗೆರೆ ವೆಂಕಟರಾಮಯ್ಯ, ಶ್ರೀ ಸು. ರುದ್ರಮೂರ್ತಿ ಶಾಸ್ತ್ರಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಶ್ರೀ ಟಿ.ಎಸ್. ನಾಗರಾಜ್, ಮುಂತಾದ ಹಿರಿಯರಿಗೆ ನಾವು ಪ್ರೀತಿಯ ನಮನಗಳನ್ನು ಸಲ್ಲಿಸುತ್ತಿದ್ದೇವೆ.

ಸಂಘದ ಎಲ್ಲಾ ಕಾರ್ಯ ಯೋಜನೆಗಳಿಗೆ ಬೆನ್ನೆಲುಬಾಗಿ ನಿಂತು ಸರ್ಕಾರದ ಕಾರ್ಯದರ್ಶಿಯವರು, ಗೌರವಾನ್ವಿತ ಸಚಿವರು, ಸನ್ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಕರೆದಾಗ ಕನ್ನಡ ಪುಸ್ತಕೋದ್ಯಮದ ಹಿತಕ್ಕಾಗಿ ಸಂಘದ ನಿಯೋಗದ ನೇತೃತ್ವ ವಹಿಸುವ ಹಾಗೂ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ನಮಗೆ ಸದಾ ತಿಳುವಳಿಕೆ ನೀಡುತ್ತಿರುವ ಗೌರವ ಮಾರ್ಗದರ್ಶಕರಾಗಿರುವ ಹಿರಿಯ ಕವಿಗಳಾದ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರು, ಚಿಂತಕರು, ವಿದ್ವಾಂಸರು ಸಂಸ್ಕೃತ ವಿ.ವಿ. ವಿಶ್ರಾಂತ ಕುಲಪತಿಗಳಾದ ಪ್ರೊ ಮಲ್ಲೇಪುರಂ ಜಿ. ವೆಂಕಟೇಶ್, ಹಾಗೂ ಹಿರಿಯ ಸಾಹಿತಿಗಳು ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ, ನಾಡೋಜ ಡಾ.ಹಂಪ ನಾಗರಾಜಯ್ಯ, ನಾಡೋಜ ಡಾ. ಕಮಲ ಹಂಪನಾ, ಡಾ. ವಸುಂಧರ ಭೂಪತಿ, ಶ್ರೀ ವಿಶ್ವೇಶ್ವರ ಭಟ್, ಶ್ರೀ ಜಿ.ಎನ್.ಮೋಹನ್, , ಶ್ರೀ ರಾ ಸೂರಿ, ಶ್ರೀ ಸ್ವಾನ್ ಕೃಷ್ಣಮೂರ್ತಿ, ಡಾ.ಎಂ.ಎಸ್.ಮೂರ್ತಿ ಹಾಗೂ ಶ್ರೀ ರಾ.ನಂ. ಚಂದ್ರಶೇಖರ್ ಇವರೆಲ್ಲರಿಗೂ ನಾವು ಪ್ರೀತಿಯ ನಮನಗಳನ್ನು ಅರ್ಪಿಸುತ್ತಿದ್ದೇವೆ.

ಈ ಸಂಘವನ್ನು ಸ್ಥಾಪಿಸಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ಜೊತೆ ಶ್ರಮಿಸಿ ನಮ್ಮನ್ನಗಲಿರುವ ಸನ್ಮಾನ್ಯ ಶ್ರೀ ಬಿ.ಕೆ. ನಂಜುಂಡಪ್ಪ (ಭಾಗ್ಯಲಕ್ಷ್ಮಿ ಪ್ರಕಾಶನ), ಶ್ರೀ ಆರ್. ಜನಾರ್ಧನ್ (ಸಾಗರ್ ಪ್ರಕಾಶನ), ಶ್ರೀ ಕೃಷ್ಣಮೂರ್ತಿ ಕೌಶಿಕ್ (ವಿಜಯ ಸಾಹಿತ್ಯ ಪ್ರಕಾಶನ) ಹಾಗೂ ಡಾ. ಟಿ.ಎಸ್. ವಿಶ್ವನಾಥ್ (ಅಳಿಲು ಸೇವಾ ಸಂಸ್ಥೆ) ಇವರನ್ನು ಸ್ಮರಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ.

ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ, ಆರ್ಥಿಕವಾಗಿ ಹಾಗೂ ಭೌತಿಕವಾಗಿ, ಪರೋಕ್ಷವಾಗಿ-ಪ್ರತ್ಯಕ್ಷವಾಗಿ ನಮ್ಮೊಂದಿಗೆ ಸಂಘದ ಕಾರ್ಯಕ್ರಮಗಳ ಯಶಸ್ಸಿಗೆ ಸದಾ ಶ್ರಮಿಸುತ್ತಿರುವ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಯುತ ಹೆಚ್.ಕೆ. ಲಕ್ಷ್ಮೀನಾರಾಯಣ ಅಡಿಗ, ಆರ್.ದೊಡ್ಡೆಗೌಡ, ಡಾ. ಎಸ್.ಜಿ. ಮಾಲತಿಶೆಟ್ಟಿ, ಬಿ.ಕೆ. ಸುರೇಶ, ವಿ. ಹೇಮಂತ್‌ ಕುಮಾರ್, ಕೆ.ಎಸ್. ಮುರಳಿ,ಎಲ್.ಎನ್. ಸುನಿಲ್, ಎಂ.ಆರ್. ಗಿರಿರಾಜು, ಡಾ.ಶರಣು ಹುಲ್ಲೂರು, ಬಿ.ಎಂ. ಚಂದ್ರಕೀರ್ತಿ, ಕೆ.ಬಿ. ಪರಶಿವಪ್ಪ, ಪ್ರವೀಣ್ ಜಗಾಟ, ಎ.ರಘುವೀರ್, ಶ್ರೀಮತಿ ಪದ್ಮಲತಾ ಮೋಹನ್, ನಿಡಸಾಲೆ ಪಿ. ವಿಜಯ್, ಲಕ್ಷ್ಮೀಶ್ರೀನಿವಾಸ, ಶ್ರೀಮತಿ ಮಂಜುಳಾ ಮಾನಸ, ವಿಭಾಗೀಯ ಸಂಚಾಲಕರಾದ ಮೈಸೂರಿನ ಮಾನಸ, ಕಲಬುರ್ಗಿಯ ಡಾ. ಶ್ರೀಶೈಲನಾಗರಾಳ, ಮಂಗಳೂರಿನ ಎಂ.ಸದಾಶಿವ, ರಾಮನಗರದ ಶ್ರೀಮತಿ ಶೈಲಾಶ್ರೀನಿವಾಸ್ ಹಾಗೂ ಮಹೇಶ್ ಕುಮಾರ್ ಇವರಿಗೆ ವಿಶೇಷವಾದ ಕೃತಜ್ಞತೆಗಳು.

ಸರ್ಕಾರದಿಂದ ಪುಸ್ತಕೋದ್ಯಮಕ್ಕೆ ಆಗಬೇಕಾಗಿರುವ ಕಾರ್ಯಗಳು

  1. ಸರ್ಕಾರದ ಆರ್ಥಿಕ ಇಲಾಖೆಯು ಪ್ರತಿ ವರ್ಷದ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನದಲ್ಲಿ ಬರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ‘ಕನ್ನಡ ಪುಸ್ತಕಗಳ ಸಗಟು ಖರೀದಿ ಯೋಜನೆಯಲ್ಲಿ ತಲಾ 500 ಪ್ರತಿಗಳಂತೆ ಕನ್ನಡ ಪುಸ್ತಕಗಳನ್ನು ಖರೀದಿಸಲು ವಾರ್ಷಿಕ 25 ಕೋಟಿ ರೂ.ಗಳ ಅನುದಾನವನ್ನು ಬಜೆಟ್ನಲ್ಲೇ ಮೀಸಲಿಡುವಂತೆ ತಮ್ಮಲ್ಲಿ ಸವಿನಯದಿಂದ ಕೋರುತ್ತೇವೆ.
  2. ಜ್ಞಾನಾರ್ಜನೆಗಾಗಿ ಓದಲು ಪುಸ್ತಕಗಳು ಓದುಗರಿಗೆ ಅವಶ್ಯವಾಗಿ ಬೇಕಾಗಿರುವುದರಿಂದ, 3 ವರ್ಷಗಳು ತಡವಾಗಿ ಖರೀದಿಸುತ್ತಿರುವುದನ್ನು ತಪ್ಪಿಸಿ, ಆಯಾಯ ವರ್ಷದಲ್ಲೇ ಪುಸ್ತಕಗಳನ್ನು ಖರೀದಿಸಲು ಕೋರುತ್ತಾ, ಈಗಾಗಲೇ ಆಯ್ಕೆಯಾಗಿರುವ 2020ನೇ ಸಾಲಿನ ಪಟ್ಟಿ ಹಾಗೂ ಆಯ್ಕೆಯಾಗಬೇಕಾಗಿರುವ 2021 ಮತ್ತು 2022ನೇ ಸಾಲಿನ ಪುಸ್ತಕಗಳನ್ನು ಆಯ್ಕೆ ಮಾಡಿ ಖರೀದಿಸಲು 50 ಕೋಟಿ ರೂ.ಗಳನ್ನು ಪ್ರಸಕ್ತ ವರ್ಷದಲ್ಲಿ ವಿಶೇಷ ಅನುದಾನ ಎಂದು ಪರಿಗಣಿಸಿ ಬಿಡುಗಡೆ ಮಾಡಲು ವಿನಂತಿಸುತ್ತೇವೆ. ಈ ಮೂಲಕ ಜ್ಞಾನರ್ಜನೆಗಾಗಿ “ಜ್ಞಾನ ಭಾಗ್ಯ” ಯೋಜನೆ ನೀಡಿದ ಕೀರ್ತಿ ತಮಗೆ ಸಲ್ಲುತ್ತದೆ.
  3. ರಾಜ್ಯದ ಪುರಸಭೆ, ನಗರ ಸಭೆ, ಬೃಹತ್‌ ನಗರ ಪಾಲಿಕೆಗಳಿಂದ ಬಾಕಿ ಇರುವ ‘ಗ್ರಂಥಾಲಯ ಕರದ ಮೊತ್ತ ಸುಮಾರು 750 ಕೋಟಿಗೂ ಹೆಚ್ಚು. ಇದರಲ್ಲಿ ಬೃಹತ್ ಬೆಂಗಳೂರು ನಗರ ಪಾಲಿಕೆ ಒಂದರಲ್ಲೇ 600 ಕೋಟಿಗೂ ಹೆಚ್ಚು ಹಣ ಬಾಕಿ ಇದೆ. ಈ ಹಣವನ್ನು ಬೆಂಗಳೂರು ನಗರ ವ್ಯಾಪ್ತಿಯ 5 ವಲಯಗಳಿಗೆ ಪುಸ್ತಕ ಖರೀದಿ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಬಳಸಲು ಗ್ರಂಥಾಲಯ ಇಲಾಖೆಯ ಲೆಕ್ಕ ಶೀರ್ಷಿಕೆಗೆ ವರ್ಗಾಯಿಸುವಂತೆ ನಿರ್ದೇಶನ ನೀಡಲು ವಿನಂತಿಸುತ್ತೇವೆ.
  4. ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಖರೀದಿಸುವ ಪುಸ್ತಕಗಳ ಪಟವಾರು ಬೆಲೆಯನ್ನು ಪರಿಷ್ಕರಿಸುವ ಬಗ್ಗೆ ತಮ್ಮ ಅಮೂಲ್ಯವಾದ ಗಮನವನ್ನು ಸೆಳೆಯುತ್ತಾ, ಸರ್ಕಾರಿ ಆದೇಶದ ಸಂಖ್ಯೆ ಇಡೀ 234 ಎಲ್‌ಐಬಿ 2015 ದಿನಾಂಕ : 22-12-2017ರಲ್ಲಿ ಪುಟಕ್ಕೆ 20 ಪೈಸೆಯನ್ನು ದಿನಾಂಕ : 01-04-2018 ರಿಂದ ಅನ್ವಯಿಸುವಂತೆ ಹೆಚ್ಚಿಸಿ ಆದೇಶಿಸಲಾಗಿತ್ತು. ಈಗಾಗಲೇ ಐದು ವರ್ಷಗಳು ಕಳೆದಿವೆ. ಇತ್ತೀಚಿನ ದಿನಗಳಲ್ಲಿ ಕಾಗದ, ಇಂಕು, ಬೈಂಡಿಂಗ್, ಮುದ್ರಣ, ಕೂಲಿ, ಸಾಗಾಣಿಕೆ, ಜಿಎಸ್‌ಟಿ ಎಲ್ಲವೂ ಹೆಚ್ಚಾಗಿದ್ದು ಪುಸ್ತಕ ಪ್ರಕಟಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ದಯಮಾಡಿ ಹಾಲಿ ಇರುವ ಬೆಲೆಯ ಮೇಲೆ ಪುಟಕ್ಕೆ 40 ಪೈಸೆಗಳ ಹೆಚ್ಚಳ ಮಾಡಿ ಆದೇಶ ಹೊರಡಿಸಲು ಪ್ರಾರ್ಥಿಸುತ್ತೇವೆ.
  5. ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳ ಅಧಿನಿಯಮ, 1956 ಅಧ್ಯಾಯ- 5 ಹಣಕಾಸು ಮತ್ತು ಲೆಕ್ಕಪತ್ರಗಳು-ಉಪನಿಯಮ 30 (1) (2) (3) (4)ರ ಪ್ರಕಾರ ಕ್ರಮ ಜರುಗಿಸಿ, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ, ನಗರ ಪಾಲಿಕೆಗಳು, ಪುರಸಭೆಗಳು, ಪಟ್ಟಣ ಪಂಚಾಯತಿಗಳು ಸಂಗ್ರಹಿಸುತ್ತಿರುವ ಶೇಕಡ 6ರಷ್ಟು ಗ್ರಂಥಾಲಯ ಕರವನ್ನು ನೇರವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ‘ಮುಖ್ಯ ಲೆಕ್ಕ ಶೀರ್ಷಿಕೆ’ಗೆ ಜಮಾ ಆಗುವಂತೆ ನಗರಾಭಿವೃದ್ಧಿ ಇಲಾಖೆಯೊಂದಿಗೆ ಸಮಾಲೋಚಿಸಿ ಆದೇಶ ಹೊರಡಿಸಿದರೆ ಪುಸ್ತಕ ಖರೀದಿ, ಡಿಜಿಟಲೈಸೇಷನ್, ಕಟ್ಟಡ ನಿರ್ಮಾಣ ಹಾಗೂ ಗ್ರಂಥಾಲಯಗಳ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ತಮ್ಮನ್ನು ಕಳಕಳಿಯಿಂದ ಕೋರುತ್ತೇವೆ.
  6. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ವಾರ್ಷಿಕ ಆಯವ್ಯಯವನ್ನು “ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ-ಲೆಕ್ಕಪತ್ರಗಳ ನಿಯಾಮವಳಿಗಳು 1975 ಅಧ್ಯಾಯ-11 ಬಜೆಟ್ ಉಪನಿಯಮ 30 (ಎ), (ಬಿ), (ಸಿ)” ಪ್ರಕಾರ ಪ್ರತಿಯೊಂದು ಗ್ರಂಥಾಲಯದ ಪ್ರಾಧಿಕಾರವು ಮುಂಬರುವ ವರ್ಷಕ್ಕಾಗಿ ನಿರೀಕ್ಷಿತ ಸ್ವೀಕೃತಿ ಮತ್ತು ಉದ್ದೇಶಿತ ಖರ್ಚುಗಳ ಅಂದಾಜು ಸಿದ್ಧಪಡಿಸಿ ಪ್ರತಿ ವರ್ಷದ ಜನವರಿ ತಿಂಗಳ ಮೊದಲ ವಾರದಲ್ಲಿ ವಿಶೇಷ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು, ರಾಜ್ಯ ಗ್ರಂಥಪಾಲಕರು ಅಂದರೆ ನಿರ್ದೇಶಕರು ಪ್ರತಿವರ್ಷ ಮಾರ್ಚ್ 15ರೊಳಗೆ ಅನುಮೋದಿಸಿ, ಅನುಮೋದಿತ ಬಜೆಟ್ ಪ್ರತಿಯನ್ನು ಸಂಬಂಧಿಸಿದವರಿಗೆ ಕಳುಹಿಸಬೇಕು ಎಂದು ಇದೆ. ಆದರೆ ಕಳೆದ ನಾಲ್ಕು ವರ್ಷಗಳಿಂದಲೂ ಆರ್ಥಿಕ ವರ್ಷದ ಅಂತ್ಯದಲ್ಲಿ ಸರ್ಕಾರದಿಂದ ಅನುಮೋದನೆಯಾಗಿ ಬರುತ್ತಿದೆ. ಇದರಿಂದಾಗಿ ಹಲವು ಯೋಜನೆಗಳು ಪೂರ್ಣವಾಗದೆ ಗ್ರಂಥಾಲಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ವರ್ಷದ ಅಂತ್ಯದಲ್ಲಿ ತರಾತುರಿಯಲ್ಲಿ ಆಯವ್ಯಯದ ಬಳಕೆಯಾಗುತ್ತಿದೆ. ದಯಮಾಡಿ ವಾರ್ಷಿಕ ಆಯವ್ಯಯ (ಬಜೆಟ್) ಅನುಮೋದನೆಯನ್ನು ಗ್ರಂಥಾಲಯ ಪ್ರಾಧಿಕಾರಗಳಿಂದ ಬರುವ ಬಜೆಟ್‌ನ್ನು ನಿರ್ದೇಶಕರು ಅನುಮೋದನೆ ನೀಡಿ ಈ ಪ್ರಕ್ರಿಯೆಗಳನ್ನು ಪ್ರತಿವರ್ಷ ಮೇ, ಜೂನ್ ತಿಂಗಳಿನಲ್ಲಾದರೂ ಮುಗಿಸಿ ಪುಸ್ತಕಗಳ ಖರೀದಿ ಹಾಗೂ ಗ್ರಂಥಾಲಯಗಳ ಸಮಗ್ರ ಅಭಿವೃದ್ಧಿಗೆ ಗಮನ ಹರಿಸುವಂತೆ ಆದೇಶ ನೀಡಲು ವಿನಂತಿಸುತ್ತೇವೆ.
  7. ಕನ್ನಡ ಪುಸ್ತಕೋದ್ಯಮದ ಬಹುದೊಡ್ಡ ಸವಾಲು ಎಂದರೆ- ಕನ್ನಡ ಪುಸ್ತಕಗಳ ಮಾರಾಟಕ್ಕೆ ಸರಿಯಾದ ಪ್ರಚಾರ, ಪ್ರೋತ್ಸಾಹ ಇಲ್ಲದೆ ಸೊರಗಿರುವ ಮಾರಾಟ ಜಾಲ. ಸರ್ಕಾರದ ಅಂಗ ಸಂಸ್ಥೆಯಾದ ಕನ್ನಡ ಪುಸ್ತಕ ಪ್ರಾಧಿಕಾರದ ನೀತಿ, ನಿಯಮಗಳನ್ನು ಬದಲಿಸಿ, ಖಾಸಗಿಯಾಗಿ ಪ್ರಕಟಿಸುತ್ತಿರುವ ಸಾವಿರಾರು ಲೇಖಕ,ಲೇಖಕ-ಪ್ರಕಾಶಕ, ಸಣ್ಣ ಪ್ರಮಾಣದ ಪ್ರಕಾಶಕರನ್ನು ಒಂದೇ ಸೂರಿನಡಿ ತಂದು, ಪುಸ್ತಕ ಪ್ರಕಟಿಸುವ ವಿಧಿ-ವಿಧಾನಗಳ ಬಗ್ಗೆ ತರಬೇತಿ ನೀಡಿ, ನಗರ, ಜಿಲ್ಲೆ ಹಾಗೂ ತಾಲ್ಲೂಕು ಬಸ್‌ ನಿಲ್ದಾಣಗಳಲ್ಲಿ ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆದು ಮಾರಾಟದ ನಂತರ ಪಾವತಿ ಆಧಾರದ ಮೇಲೆ ಖಾಸಗಿಯವರಿಂದ ಪುಸ್ತಕಗಳನ್ನು ತರಿಸಿಕೊಂಡು ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಖಾಸಗಿ ಪ್ರಕಾಶಕರಿಗೆ ಪ್ರೋತ್ಸಾಹ ನೀಡುವ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಅನೇಕ ವರ್ಷಗಳಿಂದ ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ.
  8. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಹೋಬಳಿಗೊಂದು ಸುಸಜ್ಜಿತವಾದ ಶಾಖಾ ಕೇಂದ್ರ ಗ್ರಂಥಾಲಯವನ್ನು ಸ್ಥಾಪಿಸುವುದು, ಕನ್ನಡ ಪುಸ್ತಕ ಪ್ರಾಧಿಕಾರ, ವಯಸ್ಕರ ಶಿಕ್ಷಣ ಇಲಾಖೆಯ ನವ ಸಾಕ್ಷರತಾ ಯೋಜನೆ, ಸರ್ವಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿನ ಪುಸ್ತಕಗಳ ಸಗಟು ಖರೀದಿ ಯೋಜನೆಗಳಲ್ಲಿನ ಪುಸ್ತಕಗಳ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಗಳಲ್ಲಿ ಪುಸ್ತಕ ಆಯ್ಕೆ ಸಮಿತಿಗಳನ್ನು ರಚಿಸಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಹಾಗೂ ಖರೀದಿ ಸ್ಥಗಿತವಾಗಿರುವ ಕೆಲವು ಇಲಾಖೆಗಳಲ್ಲಿ ಪುಸ್ತಕ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿದ್ದೇವೆ.

ಮೇಲಿನ ಎಂಟು ಅಂಶಗಳನ್ನು ರಾಜ್ಯದ ಮುಖ್ಯಮಂತ್ರಿಯವರು ಪರಾಮರ್ಶಿಸಿ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸುವ ಮೂಲಕ ಜ್ಞಾನಪ್ರಸಾರದಲ್ಲಿ ನಿರತರಾಗಿರುವ ಕನ್ನಡ ಪುಸ್ತಕೋದ್ಯಮವನ್ನು ಪೋಷಿಸಿ ಪ್ರೋತ್ಸಾಹಿಸಬೇಕಾಗಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ.

ಕನ್ನಡ ಪುಸ್ತಕೋದ್ಯಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಪುಸ್ತಕ ಪ್ರೀತಿಯನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿರುವ ಸಂಘದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ ಸಹಕರಿಸಬೇಕೆಂದು ಘನ ಸರ್ಕಾರ ಹಾಗೂ ಸರ್ವ ಸದಸ್ಯರನ್ನು ಪ್ರೀತಿಯಿಂದ ವಿನಂತಿಸುತ್ತೇವೆ.